ಮಠಪತಿಯವರ ವಿಚಾರ ಸ್ಪಷ್ಟತೆ ಮತ್ತು ನೇರ ಭಾಷೆಯಲ್ಲಿ ಒಂದು ಸೊಗಸುಗಾರಿಕೆ, ದಿಟ್ಟತನ ಮತ್ತು ಕಾವ್ಯಮಯತೆ ಇದೆ. ರಾಗಂ ಅವರ 'ಗಾಂಧಿ: ಅಂತಿಮ ದಿನಗಳು' ಹಾಗೂ ಪ್ರಸ್ತುತ 'ಗಾಂಧಿ: ಮುಗಿಯದ ಅಧ್ಯಾಯ' ಕೃತಿಗಳು 1947ರ ಆಸುಪಾಸಿನ ದಿನಗಳ ಭಾರತದ ಸಾಮಾಜಿಕ ಮತ್ತು ರಾಜಕೀಯ ದುರ್ದೆಸೆಯನ್ನು ಕಟ್ಟಿಕೊಡುತ್ತವೆ. ದೇಶ ವಿಭಜನೆಯಿಂದಾದ ಅನಾಹುತ, ಕೋಮುಗಲಭೆ, ಪರಿಣಾಮ ಗಾಂಧೀಜಿಯಲ್ಲಾಗುವ ತಳಮಳ ಹೀಗೆ ಹಲವು ನಮಗೆ ಗೊತ್ತಿರದ ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ಯಾವುದೇ ಹೋರಾಟ ಯಶಸ್ವಿಗೊಳ್ಳುವ ಕಾಲ ಬಂದಾಗ ಆ ಕನಸು ಕಂಡವರಿಗೆ ನಿಜವಾಗಿಯೂ ಸಂತೋಷವಾಗುತ್ತದೆ, ಸಾರ್ಥಕ ಭಾವ ಮೂಡುತ್ತದೆ. ಆದರೆ ಇಂತಹ ಭಾಗ್ಯ ಇಲ್ಲಿ ಗಾಂಧಿಗಿಲ್ಲ. ಕಾರಣ ವಿಭಜನೆಯ ಆ ದಿನಗಳು ನೆನೆಸಿಕೊಳ್ಳಬಾರದ ಘೋರ ದಿನಗಳಾಗಿ, ಯಾತನೆಯ ದಿನಗಳಾಗಿ ಮಾರ್ಪಟ್ಟಿದ್ದವು. ಭಾರತದ ಸಾಕ್ಷಿ ಪ್ರಜ್ಞೆಯಂತಿದ್ದ ಗಾಂಧೀಜಿಯ ಮನಕಲಕುವ, ಅವರ ವ್ಯಕ್ತಿತ್ವ, ಚಿಂತನೆ ಮತ್ತು ನಂಬಿಕೆಗಳನ್ನು ಅಲುಗಾಡಿಸಿದ ದುರಂತದ ದಿನಗಳಾಗಿದ್ದವು. ಡಾ.ಮಠಪತಿಯವರು, ನಿರ್ಭಾವುಕರಾಗಿ ಗಾಂಧಿಯನ್ನು ಕಟು ವಿಮರ್ಶೆಗೆ ಒಳಪಡಿಸುತ್ತಲೇ ಮನುಷ್ಯನಾಗಿ ಆತನ ಮಹತ್ವವನ್ನು ಇಲ್ಲಿ ಎತ್ತಿ ತೋರಿಸಿದ್ದಾರೆ.