“ರಾಗಂ ಅವರ ಈ ಕೃತಿಯಲ್ಲಿ ಬದುಕಿನ ಕುಲುಮೆಯಲ್ಲಿ ಬೆಂದ ಮಹಿಳೆಯರ ಆತ್ಮದ ಹೂವಿನ ಘಮಘಮ ಪುಟ ಪುಟದಲ್ಲೂ ಓದುಗರು ಅನುಭವಿಸಬಹುದು. ಸ್ತ್ರೀ ಎಂದರೆ ಎಷ್ಟೊಂದು ಫಲಕಗಳು, ಪುಳಕಗಳು, ಆಯಾಮಗಳು, ನಿಗೂಢಗಳು, ವೇಷ ಭೂಷಣಗಳು !!!! ಅವಳ ಆತ್ಮ ಎಷ್ಟೊಂದು ಅಮರ ಗೀತೆಗಳನ್ನು ಕೊಟ್ಟಿದೆ. ಅವಳು ಭೂಮಿ, ಅವಳು ಆಕಾಶ, ಅವಳು ನಭೋ ಮಂಡಲ, ಎಷ್ಟೊಂದು ಮಮತೆಯ ಸೆಳಕಗಳು ಅವಳಿಂದ ಈ ಬದುಕಿಗೆ!! ಈ ಜಗದ ಜನರಿಗೆ ಅವಳು ಹರಸಿದ್ದಾಳೆ. ಮೊಗೆ ಮೊಗೆದು ಕುಡಿದರೂ ಹಿಂಗಲಾರದ ಬಾವಿಯಂತೆಯೇ ಮಹಿಳೆ ಬದುಕಿದ್ದಾಳೆ. ಇಂಥ ಸ್ತ್ರೀಯರ ಬದುಕಿನೊಳಗೆ ಖಂಡಿತ ನೀವು ಪೂರ್ತಿಯಾಗಿ ಇಳಿಯಲಾಗದು. ನಾನು ರಾಗಂರ ಪುಸ್ತಕ ಓದಿ ಹೆಣ್ಣಾಗಿ ಹುಟ್ಟಿದ್ದಕ್ಕೆ ತುಂಬಾ ಅಭಿಮಾನ ಪಟ್ಟಿದ್ದೇನೆ. ನಾನು ಹೆಣ್ಣು, ಪ್ರಕೃತಿ, ಚಿಗುರುವವಳು, ಚಿಗುರಿಸುವವಳು, ಫಲವತ್ತಾದ ಭೂಮಿಯಾಗಿ ಬೀಜಗಳ ಬೆಳೆಯುವವಳು ಮತ್ತು ಈ ಅನಂತ ಬದುಕನ್ನು ವಿಸ್ತರಿಸುವವಳು. ಇಂಥ ವಿಸ್ತಾರದ ಬದುಕು, ರಾಗಂರ ಈ ಕೃತಿಯಲ್ಲಿ ಇದೆ